ಬಾಲಾಜಿ ವಿಶ್ವನಾಥ
1660-1720. ಮರಾಠಾ ರಾಜ್ಯವಾಳಿದ ಪೇಶ್ವೆಮನೆತನದ ಮೂಲಪುರುಷ. ಮರಾಠಾ ರಾಜ್ಯದ ಎರಡನೆಯ ಸಂಸ್ಥಾಪಕನೆಂದು ಭಾರತದ ಇತಿಹಾಸದಲ್ಲಿ ಪ್ರಸಿದ್ಧ.

ಬಾಲಾಜಿ ವಿಶ್ವನಾಥ ಜಂಝೀರಾದ ಶ್ರೀವರ್ಧನದಲ್ಲಿ ಜನಿಸಿದ. ವಿಶ್ವನಾಥ ಭಟ್ಟ ಇವನ ತಂದೆ. ಇವನ ಪೂರ್ವಿಕರು ಶ್ರೀವರ್ಧನದಲ್ಲಿ ಕಂದಾಯ ಸಂಗ್ರಾಹಕರಾಗಿದ್ದರು. ಬಾಲಾಜಿ ವಿಶ್ವನಾಥ ಪ್ರಾರಂಭದಲ್ಲಿ ಜಂಝೀರಾದ ಸಿದ್ದಿಮನೆತನದವರಲ್ಲಿ ತನ್ನ ಸೇವೆ ಸಲ್ಲಿಸಿ ಅನಂತರ 1689ರ ವೇಳೆಗೆ ಕಂದಾಯ ಇಲಾಖೆಯಲ್ಲಿ ಗುಮಾಸ್ತನಾಗಿ ಸೇರಿಕೊಂಡ. ತರುವಾಯ ದೌಲತಾಬಾದ್ ಮತ್ತು ಮಣಿಯ ಸರ್‍ಸುಬಾದಾರನಾಗಿ, ಸೇನಾಪತಿ ಧನಾಜಿ ಜಾಧವನ ಬಳಿ ಕಂದಾಯ ಸಂಗ್ರಾಹಕನಾಗಿ ಸೇವೆ ಸಲ್ಲಿಸಿದನೆಂದೂ ಹೇಳಲಾಗಿದೆ.

ಶಿವಾಜಿಯ ಮೊಮ್ಮಗ ಸಾಹುವಿಗೂ ಶಿವಾಜಿಯ ಎರಡನೆಯ ಮಗ 3ನೆಯ ಶಿವಾಜಿಗೂ ಮರಾಠಾ ರಾಜ್ಯದ ಉತ್ತರಾಧಿಕಾರಕ್ಕಾಗಿ ಸ್ಪರ್ಧೆ ಉಂಟಾಯಿತು. ಆಗ ಮರಾಠರಲ್ಲಿ ಎರಡು ಪಕ್ಷಗಳಾದುವು. ಒಂದು ಪಕ್ಷ ಸಾಹುವನ್ನೂ ಮತ್ತೊಂದು ಪಕ್ಷ 3ನೆಯ ಶಿವಾಜಿಯ ತಾಯಿಯಾದ ತಾರಾಬಾಯಿಯನ್ನೂ ಬೆಂಬಲಿಸಿದುವು. ಬಾಲಾಜಿ ವಿಶ್ವನಾಥ ಸಾಹುವಿಗೆ ಬೆಂಬಲಿಗನಾಗಿ ನಿಂತು ತಾರಾಬಾಯಿಯ ಸೇನಾಧಿಪತಿಯಾಗಿದ್ದ ಧನಾಜಿ ಜಾಧವ್ ಸಾಹುವಿನ ಪಕ್ಷವಹಿಸುವಂತೆ ಮಾಡಿದ. 1707ರಲ್ಲಿ ಖಿಡ್ ಎಂಬಲ್ಲಿ ನಡೆದ ಯುದ್ಧದಲ್ಲಿ ಸಾಹು ತಾರಾಬಾಯಿಯನ್ನು ಸೋಲಿಸಿದ. ಈ ಯುದ್ಧದಲ್ಲಿ ಗಳಿಸಿದ ವಿಜಯಕ್ಕೆ ಬಾಲಾಜಿ ವಿಶ್ವನಾಥನ ವ್ಯವಹಾರಚಾತುರ್ಯ ಕಾರಣವಾಯಿತು. ಜಯಶೀಲನಾದ ಸಾಹು 1708ರಲ್ಲಿ ಸಾತಾರದಲ್ಲಿ ಪಟ್ಟಾಭಿಷಿಕ್ತನಾದ. ಧನಾಜಿ ಜಾಧವನ ಮರಣದ ಅನಂತರ 1712ರಲ್ಲಿ ಅವನ ಮಗನಾದ ಚಂದ್ರಸೇನಸೇನಾಪತಿಯಾಗಿಯೂ ಬಾಲಾಜಿ ವಿಶ್ವನಾಥ ಸೇನಾಕರ್ತನಾಗಿಯೂ ಸಾಹುವಿನಿಂದ ನೇಮಕಗೊಂಡರು. ತಾರಾಬಾಯಿ ಪನ್ಹಾಲ ಪ್ರಾಂತ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತನ್ನ ಮಗನ ಪರವಾಗಿ ಸಾಹುವಿಗೆ ವಿರುದ್ಧವಾಗಿ ಕೊಲ್ಹಾಪುರದಲ್ಲಿ ಆಡಳಿತ ಸ್ಥಾಪಿಸಿದಳು. ಅವಳು ಸಾಹುವಿಗೆ ತೊಂದರೆ ಕೊಟ್ಟಳು. ಸಾಹುವಿನ ವಿರುದ್ಧವಾಗಿ ಅವನು ದಂಗೆ ಎದ್ದ. ಬಾಲಾಜಿ ವಿಶ್ವನಾಥ ಸಾಹುವಿನ ಬೆಂಬಲಿಗನಾಗಿ ನಿಂತು ಒಂದು ಹೊಸ ಸೈನ್ಯ ಕಟ್ಟಿ ಚಂದ್ರಸೇನನನ್ನು ಸೋಲಿಸಿದ. ಅನಂತರ ಕೊಲ್ಹಾಪುರದ ಅರಮನೆಯಲ್ಲಿ ಸಂಚುಹೂಡಿ ರಾಜಸಬಾಯಿ ಎಂಬವಳನ್ನು ತಾರಾಬಾಯಿಯ ವಿರುದ್ಧ ಎತ್ತಿಕಟ್ಟಿದ. ಅವಳು ವಿಶ್ವನಾಥನ ಸಹಾಯದಿಂದ ತಾರಾಬಾಯಿಯನ್ನೂ ಅವಳ ಮಗನನ್ನೂ ಸೆರೆಹಿಡಿದು ತನ್ನ ಮಗನಾದ 2ನೆಯ ಸಂಬಾಜಿಯನ್ನು ಕೊಲ್ಹಾಪುರದ ಸಿಂಹಾಸನದ ಮೇಲೆ ಕುಳ್ಳಿರಿಸಿದಳು.
ಬಾಲಾಜಿಯ ಕಾರ್ಯಸಾಧನೆಗಳನ್ನು ಮೆಚ್ಚಿಕೊಂಡ ಸಾಹು ಅವನನ್ನು 1713ರಲ್ಲ ಪೇಶ್ವೆಯಾಗಿ ನೇಮಿಸಿದ. ಪೇಶ್ವೆ ಆಗ ರಾಜನ ಎಂಟು ಮಂದಿಮಂತ್ರಿಗಳ ಪೈಕಿ ಒಬ್ಬ. ಪ್ರತಿನಿಧಿಯದಕ್ಕಿಂತ ಕೆಳಗಿನ ಸ್ಥಾನ ಪೇಶ್ವೆಯದಾಗಿತ್ತು. ಆದರೆ ಸ್ವಸಾಮಥ್ರ್ಯದಿಂದ ಬಾಲಾಜಿ ವಿಶ್ವನಾಥ ಕ್ರಮೇಣ ಪ್ರಬಲನಾಗಿ ಮರಾಠ ರಾಜ್ಯದ ನಿಜವಾದ ಅಧಿಪತಿಯಾದನಲ್ಲದೆ ರಾಜ್ಯದ ಬಲವನ್ನೂ ಪ್ರತಿಷ್ಠೆಯನ್ನೂ ಹೆಚ್ಚಿಸಿದ.

ಬಾಲಾಜಿ ವಿಶ್ವನಾಥ ಪೇಶ್ವೆಯಾಗಿ ನೇಮಕಗೊಂಡ ಅನಂತರ ಸಾಹುವಿನ ಶತ್ರುಗಳನ್ನು ಅಡಗಿಸುವ ಕಾರ್ಯ ಮುಂದುವರಿಸಿದ. ಸಾಹುವಿನ ಪ್ರಬಲ ವಿರೋಧಿಯೂ ಮರಾಠರ ನೌಕಾದಳಪತಿಯೂ ಆಗಿದ್ದ ಕನ್ಹೋಜಿ ಆಂಗ್ರೆಯೊಡನೆ 1714ರಲ್ಲಿ ಲೊನಾವ್ಲ ಎಂಬಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡ. ಅದರ ಪ್ರಕಾರ ಕನ್ಹೋಜಿ ಕೊಲ್ಹಾಪುರದವರೊಂದಿಗೆ ಹೊಂದಿದ್ದ ಸಂಬಂಧ ಬಿಟ್ಟು ಸಾಹುವಿಗೆ ತನ್ನ ನಿಷ್ಠೆ ಬದಲಾಯಿಸಿದ. ಬಾಲಾಜಿ ವಿಶ್ವನಾಥ ಅಧಿಕಾರಕ್ಕೆ ಬಂದ ಕಾಲದಲ್ಲಿ ದೆಹಲಿಯಲ್ಲಿ ಮೊಗಲರ ಆಸ್ಥಾನದಲ್ಲಿ ಒಡಕುಂಟಾಗಿತ್ತು. ಮರಾಠರು ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಅಭ್ಯುದಯ ಸಾಧಿಸಿಕೊಳ್ಳಬೇಕೆಂದು ವಿಶ್ವನಾಥ ಯೋಚಿಸಿದ. ಅವನು ದಖನ್ ಪ್ರಾಂತ್ಯಾಧಿಕಾರಿಯಾಗಿದ್ದ ಸೈಯದ್ ಹುಸೇನ್ ಆಲಿಯೊಡನೆ 1717ರಲ್ಲಿ ಮೈತ್ರಿಯ ಒಪ್ಪಂದ ಮಾಡಿಕೊಂಡ. 1719ರಲ್ಲಿ ಫರೂಕ್ ಸಯ್ಯಾರನ ಮರಣಾ ನಂತರ ಮೊಗಲ್ ಸಾಮ್ರಾಟನಾದ ಮಹಮ್ಮದ್ ಶಹ ಈ ಒಪ್ಪಂದಕ್ಕೆ ಸಹಿ ಹಾಕಿ ಇದನ್ನು ಸಮರ್ಥಿಸಿದ. ಮಹಮ್ಮದ್ ಶಹನಿಂದ ಬಾಲಾಜಿ ವಿಶ್ವನಾಥ ಮೂರು ಸವಲತ್ತುಗಳನ್ನು ಪಡೆದ. ಮರಾಠರು ತಮ್ಮ ಪ್ರದೇಶದಲ್ಲಿ ಸ್ವತಂತ್ರರಾಗಿ ಆಡಳಿತ ನಡೆಸುವ ಹಕ್ಕು ಪಡೆದರು. ಸಾಹು ಕೊಲ್ಹಾಪುರದಲ್ಲಿ ಆಳುತ್ತಿದ್ದ ಸಾಂಬಾಜಿಗೆ ತೊಂದರೆ ಕೊಡಬಾರದೆಂದು ಸಾಂಬಾಜಿ ಮೊಗಲ್ ಚಕ್ರವರ್ತಿಗೆ ಪ್ರತಿವರ್ಷ 10 ಲಕ್ಷ ರೂಪಾಯಿಗಳನ್ನು ಕೊಡುವಂತೆಯೂ ಒಪ್ಪಂದವಾಯಿತು. ದೆಹಲಿಯಲ್ಲಿ ಮೊಗಲರ ಬಂಧನದಲ್ಲಿದ್ದ ಸಾಹುವಿನ ತಾಯಿ ಹೆಂಡತಿ, ಸಹೋದರರು ಮತ್ತು ಇತರ ಮರಾಠಾ ಮುಖಂಡರನ್ನು ಬಿಟ್ಟುಕೊಡಲು ಮಹಮ್ಮದ್ ಶಹ ಒಪ್ಪಿದ. ಮರಾಠರ ಸ್ಥಾನಮಾನಗಳು ಹೆಚ್ಚಿದುವು. ಮರಾಠ ಜಹಗೀರುದಾರರ ಬೆಂಬಲ ಉಳಿಸಿಕೊಳ್ಳುವ ಸಲುವಾಗಿ ಪೇಶ್ವೆ ಬಾಲಾಜಿ ವಿಶ್ವನಾಥ ಜಹಗೀರಿ ಪದ್ಧತಿಯನ್ನು ಮುಂದುವರಿಸಿ ಮರಾಠ ಸರದಾರರೆಲ್ಲ ಏಕೈಕ ಧ್ಯೇಯಕ್ಕಾಗಿ ಸೇವೆ ಸಲ್ಲಿಸುವಂತೆ ಅವರನ್ನು ಒಂದಗೂಡಿಸುವ ಕಾರ್ಯನಿರ್ವಹಿಸಿದ. ಒಂದೇ ಬಗೆಯು ಆರ್ಥಿಕ ವ್ಯವಸ್ಥೆ ತಂದ. ಬಾಲಾಜಿಯ ಪ್ರಯತ್ನದಿಂದಾಗಿ ಮರಾಠಾ ರಾಜ್ಯದಲ್ಲಿ ಶಾಂತಿ ನೆಲಸಿತು. ಶಿವಾಜಿ ಕನಸು ಕಂಡಿದ್ದ ಸ್ವರಾಜ್ಯವನ್ನು ಬಾಲಾಜಿ ವಿಶ್ವನಾಥ ಮೊಗಲರೊಂದಿಗೆ ಯುದ್ಧ ಮಾಡದೆ ಮರಾಠರಿಗೆ ಗಳಿಸಿಕೊಟ್ಟ.

ಬಾಲಾಜಿ ವಿಶ್ವನಾಥ ದೇಶದಲ್ಲಿ ಕಾಣಿಸಿಕೊಂಡಿದ್ದ ದರೋಡೆಯ ಚಟುವಟಿಕೆಗಳನ್ನು ನಿಲ್ಲಿಸಿದ. ಸಾಗುವಳಿಯ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಕಂದಾಯ ಸಂಗ್ರಹಣೆಯ ಕಾರ್ಯದಲ್ಲಿ ಹಿಂದಿನ ದಲ್ಲಾಳಿ ಪದ್ಧತಿಯನ್ನು ತಪ್ಪಿಸಿದ. ಮಹಾರಾಷ್ಟ್ರದ ಹೊರಗಿನ ರಾಜ್ಯಗಳನ್ನು ಆಡಳಿತ ಸೌಕರ್ಯಕ್ಕಾಗಿ ಅನೇಕ ಭಾಗಗಳಾಗಿ ವಿಭಜಿಸಿದ. ಪ್ರತಿಯೊಂದು ವಿಭಾಗಕ್ಕೂ ಒಬ್ಬ ಮರಾಠ ಸರದಾರರನ್ನು ನೇಮಿಸಿ ಅವರಿಂದ ಕಂದಾಯ ವಸೂಲಿ ಮಾಡುವ ಏರ್ಪಾಡು ಮಾಡಿದ. ಕಂದಾಯ ವಸೂಲಿ ಕ್ರಮ ಪುನರ್ವವಸ್ಥೆಗೊಂಡಿದ್ದರಿಂದ ಮರಾಠಾ ಸರ್ಕಾರಕ್ಕೆ ಹೆಚ್ಚು ಕಂದಾಯ ಸಂದಾಯವಾಗಲಾರಂಭಿಸಿತು.

ದಕ್ಷ ಆಡಳಿತಗಾರ ರಾಜನೀತಿ ವಿಶಾರದ ಮತ್ತು ಮಹಾ ಮೇಧಾವಿಯಾಗಿದ್ದ ಬಾಲಾಜಿ ವಿಶ್ವನಾಥ 1720 ಏಪ್ರಿಲ್ 2ರಂದು ಸಸ್‍ವಾಡ್ ಎಂಬಲ್ಲಿ ತೀರಿಕೊಂಡ. ಇವನ ಮಗ ಮೊದಲನೆಯ ಬಾಜೀರಾಯನನ್ನು ಸಾಹು ಪೇಶ್ವೆಯಾಗಿ ನೇಮಿಸಿದ.
(ಟಿ.ವಿ.ಜಿಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ